ಸಮಾಜಕ್ಕೆ ಯಾವತ್ತೂ ಒಳಿತು ಬಯಸುವವರು ದೇವರಿಗೆ ಪ್ರೀಯರು. ಅವರನ್ನು ದೇವರು ಬೇಗನೇ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡು ಬಿಡುತ್ತಾನೆ. ಸಮಾಜದ ಸರ್ವಾಂಗಿನ ಅಭಿವೃದ್ದಿಯ ಕನಸು ಕಂಡು ಅದಕ್ಕಾಗಿ ಹಗಲಿರುಳು ತಮ್ಮ ಜೀವ ತೆಯ್ದವರು ಅಥಣಿಯ ರದ್ದೇರಹಟ್ಟಿ ಗ್ರಾಮದವರು ಶ್ರ್ರೀ ಶಿವಲಿಂಗಪ್ಪ ಮಲ್ಲಪ್ಪ ನಾಯಿಕ್ (ಎಸ್ ಎಂ ನಾಯಿಕ್). ಅವರು ಜನಿಸಿದ್ದು 01-01-1958 ರಂದು. ಅವರು ತಮ್ಮ 62ನೇ ವಯಸ್ಸಿನಲ್ಲಿ 29-08-2020 ರಂದು ವಯೋಸಹಜ ಅನಾರೋಗ್ಯದಿಂದ ನಿಧನಹೊಂದಿದ್ದು ಸಮಾಜಕ್ಕೆ ತುಂಬಲಾರದ ನಷ್ಟ!
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಎಸ್ ಎಮ್ ನಾಯಕ್‍ರು ಸೇವೆಗೈಯದ ಕ್ಷೇತ್ರವಿಲ್ಲ ಎಂದರೂ ಅತೀಶಯೋಕ್ತಿ ಏನಲ್ಲ. ಕೃಷಿಯಿಂದ ಶಿಕ್ಷಣ ಕ್ಷೇತ್ರದವರೆಗೆ, ಸಹಕಾರ ಕ್ಷೇತ್ರದಿಂದ ರಾಜಕಾರಣದವರೆಗೆ ಎಸ್ ಎಮ್ ನಾಯಿಕ್‍ರು ಎಲ್ಲ ಕಡೆಯೂ ಸೈ ಎನಿಸಿಕೊಂಡವರು!
ಕೆವಲ ಪಿಯುಸಿವೆರೆಗ ಶಿಕ್ಷಣ ಪಡೆದಿದ್ದರೂ, ಯಾವ ಶಿಕ್ಷಣ ತಜ್ಞನಿಗೂ ಕಡಿಮೆ ಇಲ್ಲದಂತೆ ಶಿಕ್ಷಣ ಕ್ಷೇತ್ರದ ಸುಧಾರಣೆ ಬಗ್ಗೆ ಕನಸು ಕಂಡಿದ್ದರು. ಆರೂಡಜ್ಯೋತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಅಕ್ಷರ ದಾಸೋಹ ಉಣಬಡಿಸಿದ್ದರು. ಅವರ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತಿಗೆ ಅತ್ಯಂತ ಮಹತ್ವ ನೀಡಿದ್ದರು. ಅತ್ಯಂತ ಸ್ವಚ್ಛ ವಾತಾವರಣದಲ್ಲಿ ಅಲ್ಲಿ ಮಕ್ಕಳು ವಿಧ್ಯಾಭ್ಯಾಸ ಪಡೆಯುತ್ತಿದ್ದರು. ಹತಾರು ಜನರಿಗೆ ಆ ಸಂಸ್ಥೆಯಲ್ಲಿ ಕೆಲಸ ನೀಡಿ ಅಲ್ಲಿ ಆತ್ಮೀಯ ವಾತಾವರಣ ನಿರ್ಮಿಸಿದ್ದರು. ಅನೇಕ ಬಡ ಮಕ್ಕಳಿಗೆ ಈ ಸಂಸ್ಥೆ ಸಹಾಯ ಒದಗಿಸಿ ಅವರ ಅಭ್ಯುದಯಕ್ಕೆ ಕಾರಣವಾಗಿರುವುದನ್ನು ನಾವು ಸ್ಮರಿಸಬಹುದು
ಅವರ ಸ್ವಭಾವ ಅತ್ಯಂತ ನೇರ ಮತ್ತು ನಿಷ್ಠುರ. ಯಾರ ಮರ್ಜಿ ಕಾಯುವವರಲ್ಲ. ತಮಗನಿಸಿದ್ದನ್ನು ನೇರವಾಗಿ ಹೇಳುವವರು! ಸುಮಾರು 40 ವರ್ಷಗಳಿಂದ ತಮ್ಮ ಕೊನೆವರೆಗೂ ಸಕ್ರೀಯ ರಾಜಕಾರಣದಲ್ಲಿದ್ದವರು. ಆದರೆ ಯಾವತ್ತೂ ಯಾರಿಗೂ ಬಕೆಟ್ ಹಿಡಿದು ರಾಜಕಾರಣ ಮಾಡಲಿಲ್ಲ. ತಮ್ಮ ಸ್ವಸಾಮಥ್ರ್ಯದಿಂದ ಮತ್ತು ಜನಬೆಂಬಲದಿಂದ ಅವರು ರಾಜ ಕಾರಣ ಮಾಡಿದವರು. ರಾಜ್ಯದ ದಿಗ್ಗಜ ರಾಜಕಾರಣಿಗಳೊಂದಿಗೆ ಆತ್ಮೀಯ ನಂಟು ಹೊಂದಿದ್ದರೂ ಅದನ್ನು ತಮ್ಮ ಸ್ವಾರ್ಥಕ್ಕೋಸ್ಕರ ಯಾವತ್ತೂ ಬಳಸಿಕೊಳ್ಳಲಿಲ್ಲ
ಕೃಷಿ ಹಿನ್ನಲೆಯಿಂದ ಬಂದವರು ಎಸ್ ಎಮ್ ನಾಯಿಕ್‍ರವರು. ರೈತರ ಕಷ್ಟಗಳ ಪರಿಚಯ ಅವರಿಗಿತ್ತು. ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳ ಬಗ್ಗೆ ತುಂಬಾ ಉತ್ಸುಕತೆ ಹೊಂದಿದ್ದರು. ಅಥಣಿ ಮತ್ತು ಸುತ್ತಲಿನ ದ್ರಾಕ್ಷಿ ಬೆಳೆಗಾರರ ಸಮಸ್ಯೆಯ ಬಗ್ಗೆ ಅವರಿಗೆ ಅರಿವಿತ್ತು. ತಾಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು ಆದರೆ ಶೀತಲಿಕರಣ ಘಟಕ ಇರದೇ ಇರುವುದರಿಂದ ರೈತರಿಗೆ ನಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಅರಿತಿದ್ದ ಎಸ್ ಎಮ್ ನಾಯಿಕ್‍ರವರು 1992 ರಲ್ಲಿ ಸಹಕಾರಿ ಶಿತಲೀಕರಣ ಘಟಕ ಸ್ಥಾಪಿಸಿ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷರಾದರು. ಅಥಣಿ ತಾಲೂಕಿನ ಸಹಕಾರಿ ಸಂಘಗಳನ್ನು ಒಗ್ಗೂಡಿಸಿ 1995 ರಲ್ಲಿ ಒಕ್ಕೂಟವನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲಬೇಕು.
ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಬ್ಯಾಂಕುಗಳ ಪಾತ್ರ ಮುಖ್ಯವಾದದ್ದು ಎಂಬುದನ್ನು ಅವರು ಮನಗಂಡಿದ್ದರು. ಬ್ಯಾಂಕುಗಳು ಕೇವಲ ಆರ್ಥಿಕವಾಗಿ ಸದೃಡ ಇರುವವರಿಗೆ ಮಾತ್ರ ಲೋನ್ ಸೌಲಭ್ಯ ಒದಗಿಸುತ್ತಿರುವುದರ ಬಗ್ಗೆ ಅವರಿಗೆ ಅಸಮಾಧಾನ ಇತ್ತು. ಬ್ಯಾಂಕ್ ಸೌಲಭ್ಯಗಳು ಸಮಾಜದ ಕೊನೆಯ ವ್ಯಕ್ತಿಗೂ ಸಿಗುವಂತಾಗಬೇಕು ಎಂಬುದು ಅವರ ನಿಲುವಾಗಿತ್ತು. ಇದನ್ನರಿತು 1997 ರಲ್ಲಿ ಅಥಣಿಯಲ್ಲಿ ಆರೂಡಜ್ಯೋತಿ ಪಟ್ಟಣ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸಿದರು. ಅದರ ಅಧ್ಯಕ್ಷರಾಗಿ ಬ್ಯಾಂಕ್ ಹಣಕಾಸು ಸೌಲಭ್ಯ ಎಲ್ಲರಿಗೂ ದೊರೆಯುವಂತೆ ನೋಡಿಕೊಂಡರು. ಇದರಿಂದಾಗಿ ಅನೇಕ ಜನ ನೆಲೆ ಕಂಡುಕೊಂಡು ನೂರಾರು ಉದ್ಯೋಗಗಳು ನಿರ್ಮಾಣವಾದವು
ಆಧುನಿಕ ಕೃಷಿ ಪದ್ದತಿಗಳ ಬಗ್ಗೆ ಒಲವುಳ್ಳವರಾಗಿದ್ದರೂ, ರಾಸಾಯನಿಕಗಳ ತೀವ್ರ ಬಳಕೆಗಳ ಬಗ್ಗೆ ತೀವ್ರ ವಿರೋಧ ಹೊಂದಿದ್ದರು. ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಿ ಸಾವಯವ ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದರು. ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಲ್ಲಿ ಸಹಭಾಗಿತ್ವ ವಹಿಸಿದ್ದರು. ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಿಪ್ಪರಗಿ ಬ್ಯಾರೆಜ್ ನಿರ್ಮಾಣ ಪ್ರಕ್ರಿಯೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು
ವಿಜಯಪುರದ ಷಣ್ಮುಖಆರೂಡ ಮಠದೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಆ ಮಠದ ಪರಮ ಭಕ್ತರಾಗಿದ್ದರು. ಮಠದ ಟ್ರಸ್ಟಿ ಕೂಡ ಆಗಿದ್ದರು. ಅಥಣಿಯ ಗಚ್ಚಿನ ಮಠ, ಮೋಟಗಿ ಮಠದ ಪ್ರತಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತಿದ್ದರು. ರಡ್ಢೆರಹಟ್ಟಿಯ ಬಸವಣ್ಣನ ಗುಡಿಯ ಅಭಿವೃದ್ದಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಒಂದು ಸುಂದರ ವಿಶಾಲ ಕಲ್ಯಾಣ ಮಂಟಪ ಸ್ಥಾಪನೆ ಮಾಡಿದರು. ಆ ಕಲ್ಯಾಣ ಮಂಟಪ ಇವತ್ತು ತಾಲೂಕಿನಲ್ಲಿಯೇ ಎರಡನೇಯ ಅತೀ ವಿಶಾಲ ಕಲ್ಯಾಣ ಮಂಟಪ.
ಸಮಯದ ವಿಷಯದಲ್ಲೂ ಅಷ್ಷೇ ಕರಾರುವಕ್ಕು! ಅಂದುಕೊಂಡ ಸಮಯಕ್ಕೇ ಕೆಲಸ ಪ್ರಾರಂಭ ಆಗಬೇಕು ಮತ್ತು ಅದೇ ಸೀಮಿತ ಅವಧಿಯಲ್ಲಿ ಮುಗೀಬೇಕು. ಸಮಯಪಾಲನೆಯನ್ನು ನಾವು ಅವರಿಂದ ಕಲಿಯಬೇಕು. ಅದಕ್ಕೆ ಉದಾಹರಣೆ ಅಂದ್ರೇ ಅವತ್ತು ತಹಸೀಲದಾರ್ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಕಾರ್ಯಕ್ರಮವನ್ನು ಸರೀಯಾಗಿ ಮುಂಜಾನೆ 10 ಕ್ಕೆ ಪ್ರಾರಂಭಿಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ ತಹಶಿಲದಾರರು ಕಾರ್ಯಕ್ರಮಕ್ಕೆ ಬರೋದು 5 ನಿಮೀಷ ತಡವಾಯ್ತು. ಅದೇ ಕಾರ್ಯಕ್ರಮಕ್ಕೆಂದು ಬಂದಿದ್ದ ಎಸ್ ಎಮ್ ನಾಯಿಕ್‍ರವರು ಅಲ್ಲಿನ ಸಿಬ್ಬಂದಿಯನ್ನು ಕರೆದು, ನಿಮ್ಮ ಸಾಹೇಬರು ಕೂಡಲೇ ಬರುತ್ತಾರೋ ಅಥವಾ ನಾವು ಕಾರ್ಯಕ್ರಮ ಬಹೀಷ್ಕರಿಸಿ ಹೋಗಬೇಕೋ ಎಂದು ತರಾಟೆಗೆ ತೆಗೆದುಕೊಂಡರು. ಎಲ್ಲವೂ ಸಮಯಕ್ಕೆ ಸರಿಯಾಗಿ ಶಿಸ್ತಿನಿಂದ ನಡೆಯಬೇಕು ಎನ್ನುವುದು ಅವರ ನೀಲುವು ಆಗಿತ್ತು.
ಅವರ ನೇತೃತ್ವದಲ್ಲಿ ಅಥಣಿ ತಾಲೂಕಿನಲ್ಲಿ ರೆಡ್ಡಿ ಸಮಾಜ ಸಧೃಡವಾಗಿ ಸಂಘಟನೆಗೊಂಡಿತ್ತು. ತಾಲೂಕಿನ ರೆಡ್ಡಿ ಸಮಾಜದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತಗೊಳಿಸಿದರು. ಅವರ ನೇತೃತ್ವದಲ್ಲಿ ಹೇಮರಡ್ಡಿ ಮಲ್ಲಮ್ಮಳ ಮತ್ತು ಮಹಾಯೋಗಿ ವೇಮನರ ಜಯಂತಿ ಉತ್ಸವದ ಕಾರ್ಯಕ್ರಮಗಳು ಅತ್ಯಂತ ವಿಜೃಂಬನೆಯಿಂದ ಜರುಗಿದವು. ಹಲವಾರು ಪೂರ್ವಭಾವಿ ಸಭೆಗಳಲ್ಲಿ ನಾನು ಕೂಡ ಭಾಗವಹಿಸಿದ್ದೆನೆ. ಅವರ ಸಂಘಟನಾ ಚತುರತೆಯನ್ನು ನಾನು ಗಮನಿಸಿದ್ದೇನೆ. ಅತ್ಯಂತ ವೈಚಾರಿಕವಾಗಿ ಅವರು ತಮ್ಮ ವಿಷಯ ಮಂಡಿಸುತ್ತಿದ್ದರು. ಚಿಕ್ಕವರು ದೊಡ್ಡವರು, ಬಡವ-ಬಲ್ಲಿದ ಎನ್ನದೇ ಎಲ್ಲರನ್ನೂ ಅಷ್ಟೇ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾದರೂ ಅದನ್ನು ಸಮಾಜದ ಸಂಘಟನೆಗೆ ಯಾವತ್ತೂ ಬಳಸಲಿಲ್ಲ. ಸಮಾಜ ಕಾರ್ಯದಲ್ಲಿ ರಾಜಕಾರಣ ಮತ್ತು ರಾಜಕಾರಣದಲ್ಲಿ ಸಮಾಜ ಕಾರ್ಯವನ್ನು ಯಾವತ್ತೂ ಬೆರೆಸಲಿಲ್ಲ.
ತಾಲೂಕಿನ ರೆಡ್ಡಿ ಸಮಾಜದ ಸಂಘಟನೆಯಾಗಿ ಹೇಮ-ವೇಮ ಸೇವಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದರ ಅಧ್ಯಕ್ಷರಾಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಅದರ ಲೆಕ್ಕ ಪತ್ರ ವ್ಯವಹಾರ ಸಂಪೂರ್ಣ ಪಾರದರ್ಶಕವಾಗಿತ್ತು. ಖರ್ಚು ಮಾಡಲಾದ ಪೈಸಾ - ಪೈಸಾ ಲೆಕ್ಕವನ್ನೂ ಅವರು ಜನರ ಮುಂದೆ ಇಡಿಸಲಾಗುತ್ತಿತ್ತು. ಇದು ನಾವೆಲ್ಲ ಅವರಿಂದ ಕಲಿಯಬೇಕಾದ ಪಾಠ!
ರೆಡ್ಡಿ ಸಮಾಜ ಅವರನ್ನು ಕಳೆದುಕೊಂಡದ್ದು ತುಂಬಲಾರದ ನಷ್ಟ. ನಾವೆಲ್ಲ ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡರೆ ಅದೇ ನಾವು ಅವರಿಗೆ ಕೊಡುವ ದೊಡ್ಡ ಗೌರವ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥೀಸೋಣ. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ಕರುಣಿಸಲಿ
------
ಅಪರೂದದ ಕ್ಷಣಗಳು :